Thursday, September 4, 2008

ಹೇರ್ ಸ್ಟೈಲ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

ನಾವು ವಿವಿಧ ರೀತಿಯಲ್ಲಿ ತಲೆ ಕೆಡಿಸಿಕೊಳ್ಳುತ್ತೇವೆ. ಕಾರಣ ಏನು ಅಂದ್ರೆ... ಅಯ್ಯೋ ಅದಕೇಕೂ ಕಾರಣ ಬೇಕಾ? ಬಿಡಿ ಕಾರಣ ಏನಾದ್ರು ಇರಲಿ. ಒಟ್ಟಾರೆ ತಲೆ ಕೆಡಿಸಿಕೊಳ್ಳೋದು ನಮ್ಮ ಕೆಲಸ ಅಷ್ಟೆ.ತಲೆ ಕೆಡಿಸಿ ಕೊಲ್ಲೊವುದರಲ್ಲಿ ಎರಡು ವಿಧ. ಒಂದು- ಏನೋ ಕೆಲಸ ಅಗಿಲ್ಲ ಅಂತ. ಇನ್ನೊಂದು ಏನೂ ಈ ಕೆಲಸ ಹಿಂಗಾಯ್ತಲ್ಲ ಅಂತ.
ಡಾ. ಏನಾದ್ರೂ ಆಗಲಿ ತಲೆ ಕೆಡಿಸ್ಕೋಬೇಡಿ. ಬಿಪಿ ರೈಸ್ ಆಗುತ್ತೆ. ಆದರೆ ಅವರಿಗೂ ಗೊತ್ತು ತಲೆ ಕೆಡಿಸಿಕೊಳ್ಳದೇ ಹೋದ್ರೆ ಇರೋಕಾಗಲ್ಲ ಅಂತ. ಯಾಕೆಂದರೆ ಅವರಿಗೂ ತಲೆ ಇದೆ ನೋಡಿ.. ಕೆಡಿಸಿಕೊಳ್ಳೋಕೆ.ಈಗ ಇದನ್ನೆಲ್ಲಾ ಹೇಳಿ ಯಾಕೆ ನಿಮ್ಮ ತಲೆ ಕೆಡಿಸ್ತಾ ಇದ್ದೀನಿ ಅಂದ್ರೆ.... ತಲೆ ಕೆಟ್ರೇನೆ ಈ ಬರಹಕ್ಕೆ ಕೆಲಸ. ತಲೆ ಕೆಟ್ಟಿರಿಲಿಲ್ಲ ಅಂದ್ರೆ ಇದು ಅರ್ಥವಾಗೋದು ಸ್ವಲ್ಪ ಕಷ್ಟ.
ನಮ್ಮ ಮೇಷ್ಟ್ರು ಬಯ್ತಾ ಇದ್ರು, ಲೇ ತಲೆಗಳ್ರಾ... ತಲೆ ಇರೋದು ಬರಿ ಬಾಚಕೊಳ್ಳೋದಕ್ಕಲ್ಲ ಒಂದಿಷ್ಟು ಬಳಸ್ರಿ ಅನ್ನೋರು. 'ನಿನ್ನ ತಲೆ ಕುಯ್ಯಬೇಡ ವಿಷಯಕ್ಕೆ ಬಾ' ಅಂತ ನೀವು ಅನ್ನೊದಕ್ಕಿಂತ ಮುಂಚೆ ಪೀಠಿಕೆ ಮುಗಿಸ್ತಿನಿ.
ಮೊನ್ನೆ ಒಂದು ವಿಷಯ ತಲೆ ಕೆಡಿಸ್ತು. ಏನಪ ಅಂದ್ರೆ ನಾವು ಈ ತಲೆ ಕೆಡಿಸ್ಕೊಂಡಾಗಲೆಲ್ಲಾ ಮತ್ತೆ ಬಾಚಿಕೊಳ್ಳುತ್ತೆವೆ. ಈ ಬಾಚಿಕೊಳ್ಳೊದು ಹುಟ್ಟಿದು ಯಾವಾಗಿನಿಂದ? ಮತ್ತೆ Hair style ಅನ್ನೊ concept ಹುಟ್ಟಿದ್ದು ಎಂದಿನಿಂದ ಅಂತ?ಬಹಳ ಜನ ಈ ಹೇರ್ ಸ್ಟೈಲ್ ಬಗ್ಗ ಭಾಳ ತಲೆ ಕೆಡಿಸಿಕೊಳ್ಳುತ್ತಾರೆ.
ಸುಮ್ಮನೆ ಅತ್ತಇತ್ತ ಗಮನ ಹರಿಸಿ 'ಯು' ಶೇಪ್, 'ವಿ' ಶೇಪ್, ಬಾಬ್ ಕಟ್, ಬೇಬಿ ಕಟ್, ಆಬ್ರೆಲಾ ಕಟ್ ಇತ್ಯಾದಿ ಇತ್ಯಾದಿ ಹೆಣ್ಮಕ್ಕಳಿಗೆ. ಹುಟ್ಟಿದ ಹತ್ತು ಹದಿನೈದು ದಿನಗಳಲ್ಲೆ ಅದು ಹ್ಯಾಗೆ ತೀರ್ಮಾನಸಿತ್ತಾರೋ, ಗೊತ್ತಿಲ್ಲ. ಅಂತೂ ಹೆಸರಿಡತ್ತಿದ್ದರು ನಾಗವೇಣಿ, ನೀಲವೇಣಿ ಅಂತ. ಈ ಹೆಸರುಗಳ ಅರ್ಥ ಗೊತ್ತಿದ್ದೇ, ಗೊತ್ತಿಲ್ಲದೆನೋ ಅವರು ಬಾಬ್ ಕಟ್. ಯು ಶೇಪ್ ಮಾಡಿಸಿಕೊಂಡು ಓಡಾಡತಾರೆ.
ಇದರಲ್ಲಿ ಗಂಡು 'ಮಕ್ಕಳು' ಏನು ಕಡಮೆ ಇಲ್ಲ. 'ಝಿರೋ' ಕಟಿಂಗ್, 'ಸ್ಟೆಪ್್' ಕಟಿಂಗ್, 'ಲಾಲು' ಕಟಿಂಗ್, 'ಕ್ರಾಪ್'ಕಟಿಂಗ್ ಹೀಗೆ ಹಲವಾರು ತರಹದ ಸ್ಟೈಲ್್ಗಳು.ಈ ಸ್ಟೈಲ್ ಗಳು ಬಹುಶ್ಯ ಮಾನವ ಬಟ್ಟೆ ಹಾಕಲು ಪ್ರಾರಂಭಿಸಿದ ಅಂದಿನಿಂದ ಹುಟ್ಟಿರಬಹುದು. ಈಗೀಗ ಕೂದಲಿಗಾಗಿ ಶಾಂಪು ತಯಾರಕರ ದೊಡ್ಡ ದಂಡೇ ಇದೆ. ಅದಕ್ಕೆ ಜಾಹಿರಾತು ನೀಡಲು ನಟ, ನಟಿಯರು ಹಾಗೂ ಮಾಡೆಲ್ ಗಳ ಮನಮೋಹಕ ತಾರೆಯರು ತಲೆ ಕೆದರಿಕೊಂಡು ನಮ್ಮ ತಲೆ ಕೆಡಿಸುತ್ತಲೆ ಇರುತ್ತಾರೆ.
ಗಂಡಸರಿಗೆ ಈ ಹೇರ್ ಸ್ಟೈಲ್ ಜೊತೆಗೆ ಮೀಸೆ, ಗಡ್ಡಗಳೂ ಸ್ಟೈಲ್ ಮಾಡೋದಕ್ಕೆ ಉಪಯೋಗಕ್ಕೆ ಬರುತ್ತವೆ. ಬಗೆಬಗೆಯ ಮೀಸೆಗಳ ನಡುವೆ ಹಿಟ್ಲರ್, ವೀರಪ್ಪನ್ ಅಂಥವರ ಮೀಸೆ ನೋಡಿದರೆ ಮೀಸೆ ಇಲ್ಲದೇ ಇರೋ ಅಣ್ಣಾವ್ರೆ ಎಷ್ಟೋ ಚಂದ ಅನ್ನಿಸಲ್ವಾ?ಈ ಹೇರ್ ಸ್ಟೈಲ್ ಬಗ್ಗೆ ತಲೆ ಕೆಡಿಸಿಕೊಳ್ಳೊದು ನಾವು ಕಲಿತಿದ್ದು ಸಿನೆಮಾದಿಂದ ಅನ್ಸೂತ್ತೆ. ನಮ್ಮ ಕನ್ನಡ ಸಿನಿಮಾಗಳಿಗಿಂತ ಹಿಂದಿಯಲ್ಲಿ ಇದು ಹೆಚ್ಚು.
ಅದರಲ್ಲೂ ಅಮೀರ್ ಖಾನ್ ಹೇರ್ ಸ್ಟೈಲ್ ಪ್ರಿಯ.ಆತನ ಎಲ್ಲಾ ಚಿತ್ರಗಳಲ್ಲೂ ಬೇರೆ ಬೇರೆ ಸ್ಟೈಲ್ ನೋಡಬಹುದು. ಮಂಗಲ್ ಪಾಂಡೆ ಚಿತ್ರದಲ್ಲಿ ಉದ್ದುದ್ದ ಕೂದಲು ಬಿಟ್ಟಿದ್ದ ಅಮೀರ್, ಹೊಸ ಚಿತ್ರಕ್ಕಾಗಿ ಸಣ್ಣಗೆ ಕಟ್ಟಿಂಗ್ ಮಾಡಿಸಿಕೊಂಡರೂ, ಅಷ್ಟಕ್ಕೆ ಸುಮ್ಮನಾಗಿಲ್ಲ ತಲೆಯಲ್ಲಿ ಒಂದು ಸಣ್ಣ ಲೈನ್ ಬೇರೆ.ಇನ್ನು ಲಕ್ಷ್ ಚಿತ್ರದಲ್ಲಿ ಪ್ರೀತಿ ಜಿಂಟಾಳ ಸ್ಟೈಲೇ ವಿಶೇಷ. ಈಗ ಸ್ನಾನ ಮಾಡಿ ಬಂದವರ ಹಾಗೆ.
ಕನ್ನಡದ ಕವಿಗಳು ಕೂದಲಿನ ಬಗ್ಗೆ ಪ್ರೀತಿಯುಳ್ಳವರು. ಅಷ್ಟೇ ಏಕೆ ಕೂದಲಿನ ಬಗ್ಗೆ ಬರೆಯುವವರ ಸಾಲೇ ಇದೆ. ಕುಮಾರವ್ಯಾಸ ತಲೆಗೂದಲಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದನಂತೆ. ಪುಷ್ಕರಣಿಯಲ್ಲಿ ಮುಳುಗಿ ಎದ್ದು ಬಂದು ಹಸಿ ಬಟ್ಟೆ ಮತ್ತು ನೀರು ಜಿನುಗುತ್ತಿರುವ ಕೂದಲು ಒಣಗುವ ತನಕ ಬರೆಯುತ್ತಿದ್ದನಂತೆ. ಇನ್ನೊಬ್ಬ ಲಾಕ್ಷಣಿಕ 'ಕೇಶಿ'ರಾಜನೂ hair style ಪ್ರಿಯನಿರಬೇಕು. ಹೆಸರೇ ಹೇಳುವಂತೆ ಕೇಶಿ'ರಾಜ'.
ಅಕ್ಕ ಮಹಾದೇವಿ ಕೂದಲನ್ನೆ ತನ್ನ ಮೈ ಮುಚ್ಚಲು ಬಟ್ಟೆಯಾಗಿ ಬಳಸಿ ತನಗೂ, ಕೂದಲಿಗೂ ಗೌರವ ತಂದುಕೊಂಡಾಕೆ. ಆಗ ಯಾವ ಶಾಂಪು ಬಳಸದೇ ಅಷ್ಟು ದೊಡ್ಡ ಕೂದಲು ಬೆಳಸಿದ್ದ 'ಮಹಾ'ದೇವಿ ಈಗಿನ ಎಲ್ಲಾ hairstyle ಪ್ರಿಯರಿಗೂ ಮಾಡೆಲ್.ಈ style ಅನ್ನೋದು ಕಾಲಕಾಲಕ್ಕೂ ಬದಲಾಗುತ್ತಿರುತ್ತದೆ. ಅದಕ್ಕೆ ಈ hair ಸ್ಟೈಲ್ ಏನೂ ಹೊರತಲ್ಲ. ಇದು ಕೂಡ ಕಾಲ ಬದಲಾದಂತೆ ಬದಲಾಗುತ್ತಾ ಬೆಳೆಯುತ್ತಾ ಬಂತು. ರಾಮಾಯಣ, ಮಹಾಭಾರತ ಕಾಲದಿಂದಲೂ ರಾಜಮಹಾರಾಜರು hair style ಪ್ರಿಯರೆ. ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿಯನ್ನು ದುಶ್ಯಾಸನ ಕೂದಲು ಹಿಡಿದು ಎಳೆತರುತ್ತಾನೆ. ಆಗ ಬಿಚ್ಚಿದ ಕೂದಲು ಅವನ ರಕ್ತದೊಂದಿಗೆ ಮುಡಿಗಟ್ಟಿದ ಕತೆ ಯಾರಿಗೆ ಗೊತ್ತಿಲ್ಲ ಹೇಳಿ?
ಇವನ ಬಗ್ಗೆ ಹೇಳದೇ ಹೋದರೆ ಕೂದಲ ಕತೆಯೇ ಮುಗಿಯುವುದಿಲ್ಲ. ಅವನೇ ಚಾಣಕ್ಯ. ಪ್ರತಿಜ್ಞೆಗೆ ಇನ್ನೊಂದು ಹೆಸರು. ಇವನ ಈ ಪ್ರತಿಜ್ಞೆಗೆ ಕಾರಣ ಅವನ ಜುಟ್ಟು. ಕೊನೆಗೂ ಚಾಣಕ್ಯನ ಪ್ರತಿಜ್ಞೆ ಈಡೇರಿ, ಬಿಚ್ಚಿದ ಜುಟ್ಟು ಕಟ್ಟಿದ ಚಾಲಾಕಿ ಚಾಣಕ್ಯ.
ಯುದ್ಧದ ಸಂದರ್ಭದಲ್ಲಿ ಕೆಲವು ನಿಯಮಗಳಿವೆ. ಯಾರ ಮೇಲೆ ಯುದ್ಧ ಮಾಡಬಾರದು ಅಂತ. ಅಂಥವುಗಳಲ್ಲಿ ನಿರಾಯುಧನ ಮೇಲೆ, ಹುತ್ತದ ಮೇಲೆ ನಿಂತವನ ಮೇಲೆ, ಬಿಳಿ ಬಾವುಟ ಹಿಡಿದವನ ಮೇಲೆ ಕೈ ಎತ್ತಬಾರದು ಅನ್ನುವ ನಿಯಮಗಳು.ಅದರಲ್ಲಿ ಇನ್ನೊಂದು ನಿಯಮವಿದೆ ಕೂದಲಿಗೆ ಸಂಬಂಧ ಪಟ್ಟದು. ಕೂದಲು ಬಿಚ್ಚಿ ಹೆಗಲ ಮೇಲೆ ಹರಡಿದರೆ ಅವನ ಮೇಲೂ ಯುದ್ಧ ಸಾರುವಂತಿಲ್ಲ. ಕೂದಲು ಬಿಚ್ಚಿದ್ದರೆ ಅವನು ನಿರಾಯುಧ ಎಂದೇ ಭಾವಿಸಬೇಕು.
ರಾಜಕಾರಣಕ್ಕೂ ಕೂದಲಿಗೂ ಸಂಬಂಧ ಇದೆ ಅಂದ್ರೆ ನೀವು ನಂಬಲಿಕ್ಕಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳ ಕೂದಲುದುರಿರುತ್ತವೆ. ಮತ್ತೆ ಅಂಥವರು ಬುದ್ಧಿವಂತರು ಅನ್ನೋ ಸಾಮಾನ್ಯ ನಂಬಿಕೆ ಇದೆ.
ನಾವು ನಮ್ಮ ಫ್ರೆಂಡೊಬ್ಬನಿಗೆ ಕಾಡಿಸ್ತಾ ಇದ್ದದ್ದು, ಇದೇ ವಿಷಯದ ಮೇಲೆ. ಸರ್ಕಾರ ವೃದ್ಧಾಪ್ಯ ವೇತನ, ವಿಧವಾ ವೇತನ, ಅಶ್ರಯ ಯೋಜನೆಯಲ್ಲಿ ಮನೆ ಇತ್ಯಾದಿ ಇತ್ಯಾದಿ ನೀಡುವಂತೆ ಕೂದಲು ಉದುರಿದವವರಿಗೂ ಮಾಸಿಕವೇತನ ಸಿಗುತ್ತೆ ಅಂತ.ಈ ತರಹದ ಹೋರಾಟ ಅಂತ ಏನಾದ್ರೂ ಮಾಡಿದ್ರೆ ರಾಜಕಾರಣಿಗಳ ದಂಡೇ ಚಳವಳಿಲ್ಲಿ ಭಾಗವಹಿಸಬಹುದು. ಸುಮ್ಮನೆ ಯೋಚಿಸಿ ಶೇ.90ರಷ್ಟು ರಾಜಕಾರಣಿಗಳಿಗೆ ಕೂದಲು ಉದುರಿರುತ್ತವೆ. ಇಲ್ಲ ಅಂದ್ರೆ ಗಡ್ಡದ ಮೇಲೆ ಪ್ರೀತಿ ಇರುತ್ತೆ.
ನಿನ್ನ ಮುಂಗುರಳ ನೋಡು ಹೇಗೆ ಬಾಗಿ ಬಾಗಿ ಕೆನ್ನೆಗೆಮುತ್ತಿಡುತ್ತಿವೆ ಬಾಳ ಸದರ ಕೊಟ್ಟಿಯ ಅವುಕ್ಕ ಅದಕ್ಕ ತಲೆ ಮ್ಯಾಲೆ ಕುಂತವ

ಅಂತಾ ಬರೆದು ಹೇರ್ ಸ್ಟೈಲ್ ಪ್ರಿಯರು ಸಂತೋಷ ಪಡುವ ಹಾಗೆ ಮಾಡಿದರೆ ಈ ಶಾಯಿರಿಗಾರ. ರಾಷ್ಟ್ರಕವಿ ಜಿಎಸ್್ಎಸ್ ಕೂಡ 'ಜಡೆ' ಕವಿತೆ ಬರೆದು ಕೂದಲ ಮರ್ಯಾದೆಯನ್ನು ಮೇಲೆತ್ತಿದ್ದಾರೆ.
ಇನ್ನು ಜನಪದರ ಅನುಭವ ಗಾದೆಗಳಲ್ಲಿ ಮೂಡಿ ಬಂದಿದೆ ಎಂಬ ನಂಬಿಕೆ ನಮ್ಮದು. ಅಂತಹ ಗಾದೆಗಳಲ್ಲೂ ಕೂದಲಿಗೆ ಸ್ಥಾನವಿದೆ. ಉದಾ: ನೂರು ಜುಟ್ಟು ಕೂಡಬಹುದು ಆದರೆ ಮೂರು ಜುಟ್ಟಲ್ಲ.
ಇನ್ನು ಕೂದಲು ಹೇಗೆ ಬಾಚಿಕೊಳ್ಳೋದು, ಅವುಗಳ ಸಂರಕ್ಷಣೆ ಹೇಗಿರಬೇಕು, ಯಾವು ಮುಖಕ್ಕೆ ಯಾವ ಸ್ಟೈಲ್ ಚನ್ನಾ, ಯಾವ ಸ್ಟೈಲ್್ಗೆ ಯಾವ ಕಲರ್ ಚನ್ನಾ ಹೀಗೆ ಮಾಹಿತಿ ನೀಡಲು ಅಂತರ್ಜಾಲದ ತುಂಬ ವೆಬ್ ಸೈಟ್ ಗಳಿವೆ.ಅದರಲ್ಲು ವಾರ್ಷಿಕವಾಗಿ ನೀಡುವ 'ಗ್ರ್ಯಾಮಿ' ಆವಾರ್ಡ್ಸ್ ಗಳು ಈ hair style ಗೊಸ್ಕರ್ ಮೀಸಲು. ನೀವು ನಿಮ್ಮ ಈಮೇಲ್ ವಿಳಾಸ ನೀಡಿದರೆ ನಿಮ್ಮ ಅಂದವಾದ(?) ಮುಖಕ್ಕೆ ಒಪ್ಪುವ ಸ್ಟೈಲ್್ಗಳ ಮಾಹಿತಿಯನ್ನೂ ರವಾನಿಸುವ ಸೌಲಭ್ಯ ಉಂಟು.ಇಷ್ಟೆಲ್ಲಾ ಮಾಹಿತಿ, ಅಷ್ಟೆಲ್ಲಾ ಸೆಲೂನ್್ಗಳಿವೆ. ಇನ್ನೂ ಯಾಕೆ ಕೂದಲಿನ ಬಗ್ಗೆ ತಲೆ ಕೆಡಿಸಿಕೊಳ್ಳೊದು. ನಮ್ಮ ಮುಖಕ್ಕೆ ಒಪ್ಪುವ ಒಂದು ಚಂದದ ಸ್ಟೈಲ್ ಮಾಡಿಸಿಕೊಂಡು ತಲೆ ಎತ್ತಿ ತಿರುಗಾಡೋಣ.

No comments:

ಪಂಚಮ

My photo
ಬೆಂಗಳೂರು, karnataka, India
ಇದು ಒಂಥರಾ. ಇಂಥದ್ದೇ ಅಂಥ ಏನಿಲ್ಲ. ತೀರ ಸಣ್ಣ ಅನ್ನಿಸುವ ವಿಷಯಗಳು ಆಗಬಹುದು.

ಮಳೆಹನಿ